ಸೋಮೇಶ್ವರ 1

	ಕಲ್ಯಾಣದ ಚಾಳುಕ್ಯವಂಶದ ದೊರೆ (1044-68). ಎರಡನೆಯ ಜಯಸಿಂಹ ಜಗದೇಕಮಲ್ಲನ ಮಗ. ಆಹವಮಲ್ಲ, ರಾಯನಾರಾಯಣ, ವೀರಮಾರ್ತಾಂಡ ಇವನ ಬಿರುದುಗಳು.

	ಪಟ್ಟಕ್ಕೆ ಬಂದಕೂಡಲೇ ಸೋಮೇಶ್ವರ ವೆಂಗಿಯನ್ನು ಆಕ್ರಮಿಸಿದ. ದನ್ನಾಡ ಎಂಬಲ್ಲಿ ಚೋಳರಿಗೂ ಚಾಳುಕ್ಯರಿಗೂ ಯುದ್ಧ ನಡೆದು, ಚೋಳ ದೊರೆ ರಾಜಾಧಿರಾಜ ಜಯಗಳಿಸಿ, ಚಾಳುಕ್ಯರಾಜಧಾನಿಯಾದ ಕೊಳ್ಳಿಪಾಕೆಯನ್ನು ಭಗ್ನಗೊಳಿಸಿದನೆಂದು ಚೋಳ ದಾಖಲೆಗಳು ತಿಳಿಸುತ್ತವೆ. ಆದರೆ ಕೊಳ್ಳಿಪಾಕೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿ ತೆಂದು ಚಾಳುಕ್ಯ ದಾಖಲೆಗಳು ತಿಳಿಸುತ್ತವೆ. ಇವನ ಕಾಲದಲ್ಲಿ 1048ರ ಹೊತ್ತಿಗೆ ಕಲ್ಯಾಣ ಪಟ್ಟಣ ಚಾಳುಕ್ಯರ ರಾಜಧಾನಿಯಾಯಿತು. ಸು. 1054ರಲ್ಲಿ ಚೋಳರಿಗೂ ಚಾಳುಕ್ಯರಿಗೂ ಕೊಪ್ಪಳದ ಬಳಿ ನಡೆದ ಹೋರಾಟದಲ್ಲಿ ಚೋಳ ದೊರೆ ರಾಜಾಧಿರಾಜ ಮರಣಹೊಂದಿದ. ಚೋಳರ ಮೇಲಿನ ಈ ವಿಜಯದ ಕುರುಹಾಗಿ ಅಣ್ಣಿಗೆರೆ ಎಂಬಲ್ಲಿ ಚೋಳಂಗೊಂಡ ತ್ರೈಪುರುಷ ದೇವಾಲಯ ನಿರ್ಮಿತವಾಯಿತು. 1059ರಲ್ಲಿ ದಕ್ಷಿಣ ದಿಗ್ವಿಜಯ ಯಾತ್ರೆಯನ್ನು ಕೈಗೊಂಡ ಸೋಮೇಶ್ವರ ಚೋಳ ದೊರೆಯನ್ನು ಸೋಲಿಸಿದ. ವೆಂಗಿ ಸಿಂಹಾಸನಕ್ಕಾಗಿ ನಡೆದ ಹೋರಾಟದಲ್ಲಿ ಸೋಮೇಶ್ವರ ಶಕ್ತಿವರ್ಮನಿಗೆ (II) ಸಹಾಯ ಮಾಡಿದ. 1064ರಲ್ಲಿ ಮತ್ತೊಮ್ಮೆ ಚೋಳರಿಗೂ ಚಾಳುಕ್ಯರಿಗೂ ಕೂಡಲ ಸಂಗಮದ ಬಳಿ ಯುದ್ಧ ನಡೆಯಿತೆಂದು ತಿಳಿದುಬರುತ್ತದೆ. ಚಾಳುಕ್ಯರ ಶತ್ರುಗಳಾದ ಪರಮಾರರನ್ನು ಸದೆಬಡಿಯಲು ಅಪೇಕ್ಷಿಸಿದ ಸೋಮೇಶ್ವರ 1051ರ ಹೊತ್ತಿಗೆ ಮಾಂಡವವನ್ನು ವಶಪಡಿಸಿಕೊಂಡನಲ್ಲದೆ, ಪರಮಾರ ರಾಜಧಾನಿಯಾದ ಧಾರಾಪುರಿಯನ್ನು ನಾಶಮಾಡಿದ. ಈತ ಕಳಚುರಿ ದೊರೆಯಾದ ಕರ್ಣನೆಂಬವನನ್ನೂ ಚಕ್ರಕೂಟದ ದೊರೆ ಧಾರಾವರ್ಷನೆಂಬ ವನನ್ನೂ ಸೋಲಿಸಿದನೆಂದೂ ತನಗೆ ಅವಿಧೇಯರಾಗಿ ನಡೆದ ಮುಮ್ಮಣಿ ಮತ್ತು ಮಾರಸಿಂಹ ಎಂಬ ಶಿಲಾಹಾರ ಸಾಮಂತರನ್ನು ಸದೆಬಡಿದನೆಂದೂ ತಿಳಿದುಬರುತ್ತದೆ. ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಸೋಮೇಶ್ವರ ಕೊನೆಗಾಲದಲ್ಲಿ ತುಂಗಭದ್ರಾ ನದಿಯಲ್ಲಿ ಜಲಸಮಾಧಿಹೊಂದಿದನೆಂಬು ದಾಗಿ ಬಿಲ್ಹಣ ತನ್ನ ಕಾವ್ಯದಲ್ಲಿ ತಿಳಿಸುತ್ತಾನೆ. ಉತ್ಕಟವಾದ ಜ್ವರಬಾಧೆಯಿಂದ ನರಳುತ್ತಿದ್ದ ಅರಸ ತನ್ನ ಅಂತ್ಯ ಸಮೀಪಿಸಿದುದನ್ನು ಮನಗಂಡು ತುಂಗಭದ್ರಾನದಿಯಲ್ಲಿ ಜಲಸಮಾಧಿ ಹೊಂದಿದನೆಂದು ಒಂದು ಶಾಸನ ತಿಳಿಸುತ್ತದೆ. ಈ ಘಟನೆ ನಡೆದದ್ದು ಕುರುವತ್ತಿಯಲ್ಲಿ (ಬಳ್ಳಾರಿ ಜಿಲ್ಲೆ), 1068 ಮಾರ್ಚ್ 29ರಂದು.

	ಸೋಮೇಶ್ವರನಿಗೆ ಎಂಟು ಜನ ಪತ್ನಿಯರಿದ್ದರೆಂದು ತಿಳಿದುಬರುತ್ತದೆ. ಇವನಿಗೆ ಸೋಮೇಶ್ವರ II, ವಿಕ್ರಮಾದಿತ್ಯ ಗಿI ಮತ್ತು ಜಯಸಿಂಹ ಎಂಬ ಮೂವರು ಗಂಡುಮಕ್ಕಳು; ಸುಗ್ಗಲದೇವಿ ಎಂಬ ಮಗಳನ್ನು ಇವನು ಸೇವುಣ ಸಿಂಘಣನಿಗೆ ವಿವಾಹಮಾಡಿಕೊಟ್ಟಿದ್ದ. ಸೋಮೇಶ್ವರನ ಇಪ್ಪತ್ತೈದು ವರ್ಷಗಳ ಕಾಲದ ಆಳಿಕೆಯಲ್ಲಿ ಚಾಳುಕ್ಯ ಸಾಮ್ರಾಜ್ಯ ವಿಸ್ತಾರವಾದುದು ಮಾತ್ರವಲ್ಲದೆ ಸುಭದ್ರವೂ ಆಯಿತೆಂದು ಹೇಳಬಹುದು.			
			(ಎಚ್.ಎಮ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ